Friday, 17 August 2007

ಎಷ್ಟು ಚೆನ್ನ!


ಮುಂಜಾನೆ ಬೆಳಕಲ್ಲಿ
ಹಸುರಿನ ನಡುವಲ್ಲಿ
ಚಾಚಿದ ಎಲೆಯಾಗಿ
ಇಬ್ಬನಿ ಹಿಡಿಯಲು ಎಷ್ಟು ಚೆನ್ನ!


ಸೂರ್ಯನ ಕಿರಣಗಳು,
ಸೋಂಕಿದ ಕಡೆಯೆಲ್ಲ
ವಜ್ರದ ಹೊಳಪಾಗೊ
ನೀರಾಗಿ ಹರಿಯಲು ಎಷ್ಟು ಚೆನ್ನ!

ಅರ್ಕನ ಸುಂದರ
ಮೊಗವನ್ನು ಕಂಡೊಡೆ
ಮೆರಗಿಂದ ಹಾಡುವ
ಹಕ್ಕಿಯ ಧನಿಯಾಗಲು ಎಷ್ಟು ಚೆನ್ನ!


ನೇಸರನು ನಲಿವಿಂದ
ಭುವಿಯನ್ನು ಬೆಳಗಿರಲು
ಮೆಲ್ಲನೆ ಅರಳುವ
ಹೂವಿನ ನಗೆಯಾಗಲು ಎಷ್ಟು ಚೆನ್ನ!


ಚಿನ್ನದ ಬೆಳಕು
ಬಣ್ಣವ ತುಂಬಿರಲು
ಹರುಷದಿಂದಾಡುವ
ಚಿಟ್ಟೆಯಂತಾಗಲು ಎಷ್ಟು ಚೆನ್ನ!


ಪ್ರತಿ ಮನೆಯ ಮುಂಗಡೆ
ಬೆಳಗಿನ ಸಂಭ್ರಮದ
ಶುಭಸೂಚಿಯಂತಿರುವ
ರಂಗವಲ್ಲಿಯಾಗಲು ಎಷ್ಟು ಚೆನ್ನ!

ಬೆಳಕು ಹರಿದಿರುವಾಗ,
ಆನಂದ ತುಂಬಿರಲು
ಪ್ರಕ್ರುತಿಯೊಡಗೂಡಿ
ನೇಸರನ ಸ್ವಾಗತಿಸಲು ಎಷ್ಟು ಚೆನ್ನ!