
ಕೈಲಾಸ ಪರ್ವತದ ಅರಮನೆಯಲ್ಲಿ,
ಶಿವನಿಗೆ ಬಂದಿತು ತಲೆ ನೋವು ಅಲ್ಲಿ.
ಕಾವಲುಗಾರರ ಅತಿ ಗೋಳಾಟ,
ಪಾರ್ವತಿಗೆ ಬಂದಿತು ಪಿಕುಲಾಟ.
ಗಿರಿಜೆಯು ಹೊಡೆದಳು ಗಣಪತಿಯನ್ನು,
ಮುರಿದಳು ಕೈಲಿದ್ದ ಕಡುಬನ್ನು.
ಕೆಲವರು ಹೋದರು ಕೆಲವರು ಬಂದರು,
ಕೆಲವರು ಮೇಲ್ಗಡೆ ನೋಡುತ ಕುಳಿತರು,
ತಲೆ ನೋವು ಸಹಿಸದೆ ಈಶ್ವರ ನಾಗ,
ಕಳುಹಿದ ಕಪಿಯನು ಕರೆತರಲಾಗ,
ಓಡುತ ಹೋದರು ಮಾರುತಿ ಬಳಿಗೆ,
ಕಾಡಿಸುತಿದೆ ತಲೆನೋವು ಈಶ್ವರಗೆ.
ಬಂದರು ಜನಗಳು ಒಂದಾಗಿ,
ನಿಂದನು ಮಾರುತಿ ಮುಂದಾಗಿ,
ಏನೆಲೊ ಮಾರುತಿ ತಾರೆಲೊ ಔಷಧಿ,
ಎಂದ್ಹೇಳಿದ ಶಿವ ತೊದಲುತಲಿ.
ಬಾಬಾಬುಡನ್ನಿಗೆ ಹಾರಿದನು,
ಗಿಡದಿಂದ ಬೀಜವ ಬಿಡಿಸಿದನು,
ಕೆಂಪಗೆ ಬಾಣಲೆಯಲಿ ಹುರಿದು,
ಮರಳುವ ನೀರಿಗೆ ಪುಡಿ ಬೆರಸಿ,
ಶೋಧಿಸಿ ಹಾಲು ಸಕ್ಕರೆ ಬೆರಸಿ,
ಬಿಸಿ ಬಿಸಿಯಾಗಿ ಪಾನವ ಮಾಡಿ.
ಈ ರೀತಿ ಹೇಳಿದ ಕಪಿಯೊಡೆಯ,
ಮಾಡಿಸಿ ಕುಡಿದನು ಜಗದೊಡೆಯ.
ಅಂತೂ ಈಶ್ವರನ ತಲೆನೋವು,
ನಿಲ್ಲದೆ ಓಡಿತು ಅಲ್ಲಿಂದ.
ಕಪಿ ಕೊಟ್ಟ ಬೀಜಕ್ಕೆ ಕಪಿ ಬೀಜವೆಂದು,
ಜನಗಳ ಬಾಯಿಗೆ ಧೀರ್ಘವು ಬಂದು,
ಆಯಿತು ಕಾಫಿ ಬೀಜವೆಂದು...
ಆಯಿತು ಕಾಫಿ ಬೀಜವೆಂದು...
ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಶಯಗಳು.
ಈ ಹಾಡನ್ನು ನಾನು ಚಿಕ್ಕವಳಿದ್ದಾಗ ನನ್ನ ಅಜ್ಜಿಯವರಿಂದ ಕಲಿತೆ. ನನ್ನ ಅಜ್ಜಿಯವರಿಗೆ ಈ ರೀತಿಯ ಜಾನಪದ ಗೀತೆಗಳು ಹಲವಾರು ಗೊತ್ತಿದ್ದವು. ನಾನು ಈ ಹಾಡನ್ನು ಮರೆಯುವುದರೊಳಗೆ ಇದನ್ನು ಇತರರಿಗೆ ಪರಿಚಯಿಸಬೇಕೆಂಬ ಪ್ರಯತ್ನ.
ಅಜ್ಜಿಯ ಕವನ ನೂರು ವರ್ಷಕ್ಕೂ ಹಳೆತು. ನಿಮಗೂ ಇಷ್ಟವಾಗಲಿ ಎಂದು ಬಯಸುತ್ತೇನೆ.